Sunday, 13 June 2010

ಪಯಣದ ಹಾದಿ -೧

ಸಂಜೆ ಆರೂವರೆ ಹೊತ್ತು, ಮುಂಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಗಿಜಿಗುಡುತ್ತಿತ್ತು. ನಾನು ಪ್ರಯಾಣ ಮಾಡಲಿರುವ ವಿಮಾನದ ಕೌಂಟರ್ ಎಲ್ಲಿದೆ ಎಂದು ನೋಡುವ ಪ್ರಯತ್ನ ನಡೆಸಿದ್ದೆ. ಒಬ್ಬ (ಬಹುಷಃ ಅಮೆರಿಕನ್) ಮಹಿಳೆ "ದಿಸ್ queue ಇಸ್ ಫಾರ್ ಜೆಟ್, ಡು ಯು ನೀಡ್ ಹೆಲ್ಪ್?" ಎಂದಳು. ಅರರೆ, ಮುಂಬೈನಲ್ಲೆ ಇವಳು ನಂಗೆ ಹೆಲ್ಪ್ ಮಾಡ್ತ್ಹಿದಾಳಲ್ಲಪ್ಪಾ!! ಅನ್ನಿಸಿದ್ರೂ..."ನೋ ಥ್ಯಾಂಕ್ಸ್" ಎಂದೆ ಆದಷ್ಟು ಸೌಜನ್ಯದಿಂದ.

ಮತ್ತೆ ಉದ್ದುದ್ದದ ಜೆಟ್ ಸಾಲು ತಪ್ಪಿಸಿಕೊಂಡು ಮುಂದೆ ನಡೆಯುತ್ತಿದ್ದಾಗ, ನನ್ನ ಪರಿಚಯದ ಜನ ಸಿಕ್ಕಿದರು. ಎಂಥಹ ಖರಾಬ್ airline ಕೊಟ್ಟಿದಾರೆ ಈ ಬಾರಿ ಎಂಬ ಬಗ್ಗೆ ದೂರುಗಳ ವಿನಿಮಯ ನಡೆದಿತ್ತು. ಹ್ಮ್ಮ್... ಯಾವ airline ಟಿಕೆಟ್ ಕೊಟ್ರು ಈ ದೂರುಗಳು ಇರೋದೆ. ಒಮ್ಮೆಯಾದರು, ಟ್ರಾವೆಲ್ ಡೆಸ್ಕ್, ಕಚೇರಿ ಬಗ್ಗೆ ದೂರದೇ ನಮ್ಮ ಮಾತು ಕಥೆ ಮುಂದುವರಿಯೋ ಹಾಗಿಲ್ಲ.

ಒಹ್.. ವಿಷಯಕ್ಕೆ ಬರ್ತೇನೆ.. ಏನಪ್ಪಾ ಅಂದ್ರೆ ನಮ್ಮ ವಿಮಾನದ ಬುಕಿಂಗ್ ಇದ್ದದ್ದು ರಾತ್ರೆ ೧೦.೩೦ಗೆ. ಆದ್ರೆ ನಾನು ೬.೦೦ ಘಂಟೆಗೆಲ್ಲ ನಿಲ್ದಾಣ ತಲುಪಿಬಿಟ್ಟಿದ್ದೆ. (ಆದಿನ ಮುಂಬೈ ನಲ್ಲಿ ರೈಲ್ವೆ ಮುಷ್ಕರ ನಡೆದಿತ್ತು. ಸಂಚಾರದ ಸಮಯದ ಬಗ್ಗೆ ತಲೆ ಕೆಡಿಸ್ಕೊಂಡು ೧.೩೦ ತಾಸು ಮೊದುಲೇ ಹೊರಟಿದ್ದೆ. ಆದರೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಳ್ಳದ ಕಾರಣ ಸಮಯದಲ್ಲಿ ತಲುಪಿಬಿಟ್ಟಿದ್ದೆ)

ಇನ್ನೊಂದು ಒಂದೂವರೆ ಘಂಟೆ ಕಾಲಹಾಕಬೇಕಲ್ಲಪ್ಪ ಎಂದುಕೊಳ್ಳುತ್ತ ಒಂದು ಕ್ಯಾಪ್ಪುಚಿನೋ ಕಪ್ ಹಿಡಿದುಕೊಂಡು ಅಲ್ಲಿಯೇ ಇರುವ ಕೌಚ್ ಒಂದರಲ್ಲಿ ಕುಳಿತು ಕೊಂಡೆ..ಕಯ್ಯಲ್ಲಿ ನೆವಕ್ಕೊಂದು ಪುಸ್ತಕ.

ಒಂದೆರಡು ಸಿಪ್ಪು ಕಾಫಿ ಕುಡಿದಿರಬಹುದು, ಅಷ್ಟರಲ್ಲಿ ಜೆಟ್ ವಿಮಾನದ ಉದ್ಯೋಗಿಯೊಬ್ಬ, ಇಬ್ಬರು ಹುಡುಗಿಯರನ್ನ (ಸುಮಾರು ೧೫-೧೮ ವರ್ಷದವರಿರಬಹುದು.. ನನ್ನ ಕಿರಿಯ ತಂಗಿಗಿಂತ ಕಿರಿಯರು) ಕರೆದುಕೊಂಡು ಬಂದು ಪಕ್ಕದಲ್ಲಿದ್ದ ಕಾಯವ ಸಾಲಿನಲ್ಲಿ ನಿಲ್ಲಿಸಿ "ಆಪ್ ಲೋಗ್ ಇದರ ರುಕ್ಹೋ.. ಯೌ ಸ್ಟ್ಯಾಂಡ್ ಹಿಯರ್ " ಎಂದ. ಇದೇನು ಅಂತಹ ವಿಶೇಷವಲ್ಲ.. ಬಹಳಷ್ಟು ಮಕ್ಕಳು, ಹಿರಿಯರು, ಒಬ್ಬೊಬ್ರೆ ಪ್ರಯಾಣಿಸುವಾಗ ಹೀಗೆ ವಿಮಾನದ ಸಿಬ್ಬಂದಿಗಳು ಸಹಾಯ ಮಾಡುತ್ತಾರೆ.

ಹಾಗಾದ್ರೆ ಏನು ಅನ್ನದೆ ಯಾಕ್ಹೀಗೆ ಎಳೀತಿದಿಯ ಅಂತೀರಾ...

ಈ ಇಬ್ಬರು ಎಳೆಯರ ಮುಖ ನೋಡಿದ್ರೆ, ಅವರಿಗೆ ಆವಯ್ಯ ಹೇಳಿದ್ದೇನು ಅರ್ಥ ಆಗೋದಿರಲಿ, ಕಿವಿಗೂ ಬಿದ್ದನ್ತಿರಲಿಲ್ಲ. ಒಬ್ಬರಿಗಿಬ್ಬರು ಒತ್ತಿಕೊಂಡು ನಿಂತಿದ್ದರು. ಮುಖದಲ್ಲಿ ಯಾವುದೇ ಭಾವನೆಗಳಿಲ್ಲ.. ಈವಯಸ್ಸಿನ ಹುಡುಗಿಯರು ಸ್ವಲ್ಪ ಜಾಸ್ತಿಯೇ ಅನ್ನೋಷ್ಟು articulate ಆಗಿರ್ತಾರೆ. ಅದಿಲ್ಲಾಂದ್ರೆ ಸ್ವಲ್ಪ ಮಟ್ಟಿನ ಅಸಹನೆ, ಸಿಟ್ಟು ಅಥವಾ ಅಸಹಾಯಕತೆ ಅಂತು ಇರಲೇ ಬೇಕು. ಸಾಲಿನಿಂದ ಹೊರಗೆ ಕರ್ಕೊಂಡು ಬಂದು ಸಾಲಿನ ಕೊನೆಗೆ ನಿಲ್ಲಿಸಿದರೆ ನೀವ್ ಸುಮ್ನೆ ಇರ್ತೀರಾ?

ಐದು ನಿಮಿಷ ನಾನೇನು ಗಮನಿಸಿಲ್ಲ ಅನ್ನೋ ಹಾಗೆ ಪುಟ ತಿರುಗಿಸುತ್ತಾ ಕುಳಿತೆ. ಆದ್ರೆ ಈ ಮರ್ಕಟ ಮನಸ್ಸು ಇದೆಯಲ್ಲ... ಮತ್ತೆ ಅವರನ್ನೇ ಗಮನಿಸೋದಕ್ಕೆ ಶುರು ಮಾಡ್ತು. ಇಬ್ಬರು ಹುಡಿಗಿಯರ ಕಯ್ಯಲ್ಲು ನೇಪಾಳಿ ಪಾಸ್ಪೋರ್ಟ್. ಅಷ್ಟರಲ್ಲಿ, ಕೌಂಟರಿನಲ್ಲಿ ಕುಳಿತಿದ್ದ ಜೆಟ್ ಉದ್ಯೋಗಿ ಅವರನ್ನ ಕರೆದು "ಇಮಿಗ್ರೆಷನ ಅವ್ರು ತಿರಸ್ಕರಿಸಿದ್ದಾರಲ್ಲ .. .. ನೀವು ಇನ್ನು ಈ ಕೌಂಟರ್ನಲ್ಲಿ ಚೆಕ್ ಇನ್ ಮಾಡೋ ಹಾಗಿಲ್ಲ.. ಹೋಗಿ..ಹೋಗಿ" ಎಂದು ಇಂಗ್ಲಿಷ್, ಹಿಂದಿ ಎರಡು ಭಾಷೆನಲ್ಲು ಜೋರು ಜೋರಾಗಿ ಹೇಳಿದಳು. ಮತ್ತೊಮ್ಮೆ ಹುಡುಗಿಯರ ಮುಖ ನೋಡಿದೆ, ಅದೇ ನಿರ್ಲಿಪ್ತ ಭಾವನೆ. ಅದು ಅವರಿಗೆ ಹೇಳಿದ್ದೆ ಅಲ್ಲವೇನೋ ಎಂಬಂತೆ.

ಅಷ್ಟರಲ್ಲಿ ತಿರುಗಿ ಬಂದ ಇನ್ನೊಬ್ಬ (ಮೊದಲು ಅವರನ್ನ ಅಲ್ಲಿ ನಿಲ್ಲಿಸಿ ಹೋಗಿದ್ದನಲ್ಲ ಆತ) ಸ್ವಲ್ಪ ಮಟ್ಟಿನ ಕಥೆ ಹೇಳಿದ. ಆ ಇಬ್ಬರು ಹುಡುಗಿಯರಿಗೂ, ಇಂಗ್ಲಿಷ್ ಆಗಲಿ ಹಿಂದಿಯಾಗಲಿ ಬರುವುದಿಲ್ಲ. ದುಬೈಗೆ ಹೋಗುವ ಟಿಕೆಟ್ ಇದೆ ಅವರ ಬಳಿ ಆದರೆ ಅದಕ್ಕೆ ಪೂರಕವಾದ ಇನ್ಯಾವುದೇ ಕಾಗದ ಪತ್ರವಿಲ್ಲ. ಇಮಿಗ್ರೆಷನ ಅವ್ರು ಪಾಸು ಮಾಡೋದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಆದ್ರೆ ಈ ಹುಡುಗಿಯರಿಗೆ ವಾಪಸ್ ಎಲ್ಲಿಗೆ ಹೋಗಬೇಕು ಅಥವಾ ಹೋಗಬೇಕು ಎಂದು ಅರ್ಥವೇ ಆದಂತಿಲ್ಲ.

ಇಂಥಹ ಕೇಸ್ಗಳು ಅಪರೂಪವೇನಲ್ಲ.. ಆದ್ರೆ ಅಪರೂಪಕ್ಕೆ ನೋಡೋ ನನ್ನಂಥವರಿಗೆ ಬಹಳಷ್ಟು ಕನಿಕರವಾಗುತ್ತೆ. ಯಾರದೋ ಮನೆಯ ಕೆಲಸಕ್ಕೋ ಅಥವಾ ಇನ್ಯಾವುದೋ ಕೆಲಸಕ್ಕೋ, ದುಬೈ ಅಂತಹ ಪ್ರದೇಶಕ್ಕೆ ಹೊರಟಿರುವ ಇವರಿಗೆ, ಯಾವುದೇ ಕನಿಷ್ಠ ಮಾಹಿತಿಯೂ ಇಲ್ಲ. ಯಾವ ಕೆಲಸದ ಮೇಲೆ, ಎಲ್ಲಿಗೆ ಹೊರಟಿದ್ದೇವೆ ಎಂಬುದರ ಅರಿವೂ ಇದ್ದಂತಿಲ್ಲ.

ಪ್ರತಿದಿನವೂ ಇಂಥಹ ಹಲವರು, ಆ ದಿನದ ರೆಜೆಕ್ತ್ ಫೈಲಿನಲ್ಲಿ ಒಂದು ಸಂಖ್ಯೆಯಾಗಿ ಮುಕ್ತಾಯವಾಗುತ್ತಾರೆ. ಅವರ ಬವಣೆಯ ಬದುಕು ಆದಿ ಅಂತ್ಯವಿಲ್ಲದೆ ಮುಂದುವರಿಯುತ್ತದೆ.

No comments:

Post a Comment